ಪ್ರಾಣಿಗಳಲ್ಲಿ ವಲಸೆ

	ಅನೇಕ ಪ್ರಾಣಿ ಗುಂಪುಗಳಲ್ಲಿ ಕಂಡುಬರುವ ಸಾಮೂಹಿಕ ಸ್ಥಳಾಂತರತೆ (ಮೈಗ್ರೇಷನ್ ಇನ್ ಆ್ಯನಿಮಲ್ಸ್). ಇಡೀ ಪ್ರಾಣಿರಾಶಿಯೇ ಒಂದು ಖಂಡದಿಂದ ಇನ್ನೊಂದಕ್ಕೆ ಸಾಗುವುದರಿಂದ ಹಿಡಿದು ಕಾಗೆ, ಗಿಳಿ ಮುಂತಾದ ಹಕ್ಕಿಗಳು ದಿನನಿತ್ಯ ತಮ್ಮ ಗೂಡುಗಳಿಂದ ಆಹಾರಾನ್ವೇಷಣೆಗೆ ಹೋಗಿ ಸಂಜೆ ವಾಪಸಾಗುವುದರ ತನಕ ಕಾಣುವ ಎಲ್ಲ ಬಗೆಯ ಸ್ಥಳಾಂತರತೆಯನ್ನು ಈಪದದ ಅರ್ಥವ್ಯಾಪ್ತಿಯಲ್ಲಿ ಸೇರಿಸಬಹುದು. ಸಾಗರದ ಅಲೆಗಳಿಗೆ ಅಲ್ಲಿಯ ಅಕಶೇರುಕಗಳು ತೋರುವ ಲಯಬದ್ದ ಸಂಚಲನ, ಲೆಮ್ಮಿಂಗ್, ಮಿಡತೆ ಮುಂತಾದ ಪ್ರಾಣಿಗಳಲ್ಲಿ ಕಾಣಬರುವ ರಾಶಿ ಚಲನೆಯ ಆವರ್ತನಗಳು, ಕಡಲಿನಿಂದ ಭೂರಿಸಂಖ್ಯೆಯಲ್ಲಿ ತಮ್ಮ ಜನನ ತಾಣಗಳಲ್ಲಿ ಮೊಟ್ಟೆಯಿಡಲು ಹಿಂದಿರುಗುವ ಸ್ಯಾಲ್ಮನ್, ಹಾವುಮೀನು ಮುಂತಾದವುಗಳ ಸಾಮೂಹಿಕ ಸಂಚಾರ-ಇವು ಪ್ರಾಣಿಗಳ ವಲಸೆಯ ಕೆಲವು ನಿದರ್ಶನಗಳು. ಈ ತೆರನ ವಲಸೆಯನ್ನು ಚಿಟ್ಟೆ, ಪತಂಗ, ಕೊಡತಿಕೀಟ, ಸಾಗರವಾಸಿ ಮೀನುಗಳು, ನೆಲಗಪ್ಪೆ, ಸ್ಯಾಲಮ್ಯಾಂಡರು, ಬಾವಲಿ, ಗೊರಸುಪಾದವುಳ್ಳ ಸ್ತನಿಗಳು, ಸೀಲ್, ತಿಮಿಂಗಿಲ ಮುಂತಾದ ಪ್ರಾಣಿಗಳಲ್ಲೂ ವಿಶೇಷವಾಗಿ ಹಲವಾರು ತೆರನ ಹಕ್ಕಿಗಳಲ್ಲೂ ಕಾಣಬಹುದು.

	ವಲಸೆ ಪದದ ನಿಷ್ಕøಷ್ಟಾರ್ಥದ ಬಗ್ಗೆ ಬಹುವಾದ ಚರ್ಚೆ ನಡೆದಿದೆ. ಮರಿಹಾಕುವ ಸ್ಥಳದಿಂದ ಹಿಡಿದು ಮರಿ ಹಾಕದಿರುವ ಸ್ಥಳವನ್ನು ತಲಪುವವರೆಗಿನ ಸಂಪೂರ್ಣವಾಗಿ ನಿಯಮಿತವಾದ ಚಲನೆಯನ್ನು ವಲಸೆ ಎಂದು ಕರೆದರೆ ಯಾವಾಗಲೂ ಅನುಕೂಲವಾದ ಸನ್ನಿವೇಶವನ್ನುಂಟುಮಾಡುವ, ನಿಯತಕಾಲಿಕವಾಗಿ ಪುನರಾರ್ತಿಸುವ ಹಾಗೂ ಚಲನೆಯ ದಿಕ್ಕಿನಲ್ಲಿ ವ್ಯತ್ಯಯವಾಗುವ ಬೀಡಿನ ಬದಲಾವಣೆಯೇ ವಲಸೆ ಎಂಬುದು ಎ. ಎಲ್. ತಾಮ್ಸನ್ ಎಂಬಾತನ ಅಭಿಪ್ರಾಯ. ಡಬ್ಲ್ಯೂ. ಹೀಪ್ ಎಂಬಾತನ ಪ್ರಕಾರ ಪ್ರಾಣಿಗಳಲ್ಲಿ ಎರಡು ವಿಧದ ಸಾಮೂಹಿಕ ಸಂಚಲನೆ ಇದೆ. ಇವುಗಳ ಪೈಕಿ ಹಿಂತಿರುಗುವ ಚಲನೆ ಪ್ರಜನನಕ್ರಿಯೆಗೋಸ್ಕರವೆಂದೂ ಇದೇ ವಲಸೆ ಎಂದೂ ಇನ್ನೊಂದು ತೆರನ ಚಲನೆಯಲ್ಲಿ ಪ್ರಾಣಿಗಳು ಹಿಂತಿರುಗುವುದಿಲ್ಲವೆಂದೂ ಇದು ಸಾಮಾನ್ಯವಾಗಿ ಆಹಾರಾನ್ವೇಷಣಾರ್ಥವೆಂದು ಆತ ವಿವರಣೆ ನೀಡಿದ್ದಾನೆ. ನಿಯತ ಕಾಲಿಕವಾದ, ಬಹುಶಃ ದಿಕ್ಕಿನ ಸಮಾವೇಶವಿಲ್ಲದ, ಪ್ರಾಣಿಯ ಸ್ವಪ್ರಯತ್ನದಿಂದ ಉಂಟಾಗುವ, ತನ್ನ ಹಿಂದಿದ್ದ ನೆಲೆಯನ್ನು ಬಿಡುವ ಮತ್ತು ವ್ಯಾಪ್ತಿಯಾದ ಸಂಚಲನೆಯೇ ವಲಸೆ ಎಂದು ಸಿ.ಬಿ. ವಿಲಿಯಮ್ಸ್ ಎಂಬಾತ ಅಭಿಪ್ರಾಯ ಪಟ್ಟಿದ್ದಾನೆ. ಮೊದಲ ನೋಟಕ್ಕೆ ಒಂದೇ ದಿಕ್ಕಿನಲ್ಲಿ ಸಾಗುವಂತೆ ಕಾಣುವ ಚಲನೆಯನ್ನೂ ಇದರಲ್ಲಿ ಸೇರಿಸಬಹುದು. ಆದರೆ ಗಾಳಿ ಮತ್ತು ಸಮುದ್ರ ತರಂಗಗಳಿಂದಾಗಿ ಪ್ರಾಣಿಯನ್ನು ಸೆಳೆದುಕೊಂಡು ಹೋಗುವ ಚಲನೆ ಇದಕ್ಕೆ ಹೊರತು. ವಾರ್ಷಿಕವಾಗಿ ಮರಿ ಮಾಡುವ ಕಾಲದಿಂದಾಗಿ ದೀರ್ಘ ಆಯುಸ್ಸಿನ ಮತ್ತು ನಿಧಾನಗತಿಯ ಪ್ರಜನನ ಕ್ರಿಯೆಯುಳ್ಳ ಪ್ರಾಣಿಗಳಲ್ಲೂ, ಚಲನೆಗಳು ನಿಗದಿಯಾಗಿದ್ದು, ಒಂದೇ ಪ್ರಾಣಿ ಒಂದೇ ದಿಕ್ಕಿನಲ್ಲಿ ಒಂದಕ್ಕಿಂತ ಹೆಚ್ಚು ಸಲ ಚಲಿಸಬಹುದು. ದೀರ್ಘ ಆಯಸ್ಸಿರುವ ಆದರೆ ಒಂದೇ ಒಂದು ಮರಿಹಾಕುವ ಪ್ರಾಣಿ ಪ್ರತಿ ಅಂತರವನ್ನೂ ಒಂದು ಬಾರಿ ಮಾತ್ರ ದಾಟುತ್ತದೆ. ಕಡಿಮೆ ಆಯಸ್ಸಿನ ಹಾಗೂ ಬಹುತ್ವರಿತ ಪ್ರಜನನಕ್ರಿಯೆಯುಳ್ಳ ಪ್ರಾಣಿಗಳು (ಉದಾ : ಕೀಟಗಳು) ವಿಭಿನ್ನ ದಿಕ್ಕುಗಳಲ್ಲಿ ಚಲಿಸುವುದುಂಟು.

	ಎಲ್ಲ ಪ್ರಾಣಿಗಳಲ್ಲಿ ಕಂಡುಬರುವ ವಲಸೆಯ ಬಹುಗಣನೀಯ ಅಂಶವೆಂದರೆ ಅವುಗಳ ನೆಲೆ ನಿರ್ಧರಿಸುವ ಅಸಾಧಾರಣ ಸಾಮಥ್ರ್ಯ. ಇದರಿಂದಾಗಿ ಅವು ಹೆಚ್ಚು ಕಡಿಮೆ ಒಂದೇ ದಿಕ್ಕಿನಲ್ಲಿ ಸಾವಿರಾರು ಕಿಮೀ ದೂರ ಸಾಗುವುದುಂಟು. ಇದರ ಬಗ್ಗೆ ಅನೇಕ ವಿವರಣೆಗಳಿದ್ದರೂ ಯಾವುದಕ್ಕೂ ವಲಸೆಯ ನಿಗೂಢತೆಯನ್ನು ಬಿಡಿಸಲಾಗಿಲ್ಲ. ಕೆಲವು ಮೀನುಗಳು ನದಿಯ ಪ್ರವಾಹಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವುವು, ಹಕ್ಕಿಗಳು ಹಾಗೂ ಕೀಟಗಳು ಗಾಳಿಯಲ್ಲಿ ದಿಕ್ಕನ್ನು ಪತ್ತೆ ಹಚ್ಚುವುವು. ಇವಕ್ಕೆ ವಿವರಣೆ ಇನ್ನೂ ಅಸ್ಪಷ್ಟವಾಗಿಯೇ ಇದೆ.

	ಸ್ತನಿಗಳಲ್ಲಿ ವಲಸೆ : ಚಳಿಗಾಲ ಬಂದಾಗ ಜಿಂಕೆಗಳು ಪರ್ವತಶ್ರೇಣಿಗಳಿಂದ ಕೆಳಗಿನ ಬಯಲುಸೀಮೆಯೆಡೆಗೆ ಸಾಗುವುವು. ಆಗ ಜಿಂಕೆಗಳನ್ನು ತಿನ್ನುವ ತೋಳ ಮತ್ತಿತರ ಹಿಂಸೆ ಪ್ರಾಣಿಗಳು ಇವನ್ನು ಹಿಂಬಾಲಿಸುತ್ತವೆ. ಅಮೆರಿಕದ ಬಯಲು ಸೀಮೆಗಳಲ್ಲಿ ವಾಸಿಸುತ್ತಿದ್ದ ಕಾಡೆಮ್ಮೆಗಳು ದೊಡ್ಡ ಮಂದೆಗಳಲ್ಲಿ ವಸಂತಋತುವಿನಲ್ಲಿ ಉತ್ತರಕ್ಕೂ ವರ್ಷ ಋತುವಿನಲ್ಲಿ ದಕ್ಷಿಣಕ್ಕೂ ಚಲಿಸುತ್ತಿದ್ದುವು. ಉತ್ತರ ಅಮೆರಿಕದ ತೀರ ಪ್ರದೇಶದಲ್ಲಿ ತಿಮಿಂಗಿಲಗಳು ತಮ್ಮ ನಿರ್ದಿಷ್ಟ ಮಾರ್ಗದಲ್ಲಿ ಈಜಿ ಚಲಿಸುವುವು. ಹುಲ್ಲುಗಾವಲಿನ ಇಲಿಗಳ ಸಂಬಂಧಿಗಳಾದ ಲೆಮ್ಮಿಂಗುಗಳ ವಲಸೆ ವಿಚಿತ್ರ ತೆರನಾದುದು. ನಾರ್ವೆ ಮತ್ತು ಸ್ವೀಡನ್ನುಗಳ ಉತ್ತರಭಾಗದ ಪರ್ವತಗಳಲ್ಲಿ ವಾಸಿಸುವ ಇವು ಕಣಿವೆ ಪ್ರದೇಶಗಳಲ್ಲಿ 5 ರಿಂದ 20 ವರ್ಷಗಳಿಗೊಂದು ಬಾರಿ ಕಾಣಿಸಿಕೊಂಡು ಸಸ್ಯಾಹಾರವನ್ನು ಸೇವಿಸುತ್ತ ನೇರವಾಗಿ ಕಡಲ ಕಿನಾರೆಗೆ ಸಾಗಿ ನೀರಿಗೆ ನೆಗೆದು ಮುಳುಗುತ್ತವೆ. ಸಂಖ್ಯೆಯ ಶೀಘ್ರ ಹೆಚ್ಚಳದಿಂದಾಗಿ ಲೆಮ್ಮಿಂಗುಗಳು ಈ ಬಗೆಯ ವಲಸೆ ಹಾಗೂ ಸಾಮೂಹಿಕ ಆತ್ಮಹತ್ಯೆಯಲ್ಲಿ ತೊಡಗುವುವೆಂದು ತೋರುತ್ತದೆ. ಕೆಲವು ವರ್ಷಗಳಲ್ಲಿ ಲೆಮ್ಮಿಂಗುಗಳು ಎಷ್ಟು ಹೆಚ್ಚುತ್ತವೆಯೆಂದರೆ ತಾವು ಇರುವ ಸ್ಥಳದಲ್ಲಿ ದೊರೆಯುವ ಆಹಾರವನ್ನೆಲ್ಲ ಇವು ತಿಂದುಬಿಡುತ್ತವೆ. ಆಗ ಹೊಸ ಪಸಲೆಗಳನ್ನರಸಿ ತಾವು ಹುಟ್ಟಿದ ಸ್ಥಳವನ್ನು ಬಿಟ್ಟು ಗುಂಪುಗುಂಪಾಗಿ ಸಂಚರಿಸುತ್ತ ಕೊನೆಗೆ ಕಡಲ ನೀರಿಗೆ ಬಂದು ಧುಮುಕುತ್ತವೆ.

	ಅಲಾಸ್ಕದ ತುಪ್ಪಳದ ಸೀಲ್‍ಗಳು ಚಳಿಗಾಲವನ್ನು ಉತ್ತರ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಕಳೆದು ವಸಂತದಲ್ಲಿ, 3200 ಕಿಮೀ ಉತ್ತರದಲ್ಲಿರುವ, ಪ್ರಿಬಿಲಾಫ್ ದ್ವೀಪಗಳಿಗೆ ಹಿಂತಿರುಗುತ್ತವೆ. ಭೂವಾಸಿ ಸ್ತನಿಗಳಲ್ಲಿ ದಕ್ಷಿಣ ಆಫ್ರಿಕದ ಸ್ಟ್ರಿಂಗ್‍ಬಾಕ್ ಜಿಂಕೆ ಸಾಮಾನ್ಯವಾಗಿ ಅನಿರ್ದಿಷ್ಟವಾಗಿ ಚಲಿಸುತ್ತದೆ. ಆದರೆ ಆರೆಂಜ್ ನದಿಯ ದಕ್ಷಿಣದಲ್ಲಿಯ ಬುಷ್‍ಮನ್‍ಲ್ಯಾಂಡಿನಲ್ಲಿ ಪ್ರಸವಿಸಲೋಸ್ಕರ ಪ್ರತಿವರ್ಷ ಸಾವಿರಾರು ಸ್ಟ್ರಿಂಗ್‍ಬಾಕ್‍ಗಳು ಸಾಮೂಹಿಕವಾಗಿ ಮರಳುಗಾಡಿನಿಂದ ಪರ್ವತಗಳೆಡೆಗೆ ವಲಸೆಹೋಗುತ್ತವೆ. ಬಾವಲಿಗಳು ಗುಹೆಗಳಲ್ಲಿ ಹಾಗೂ ರಕ್ಷಣೆಯಿರುವಂಥ ತಗ್ಗುಸ್ಥಳಗಳಲ್ಲಿ ತಮ್ಮ ಸುಪ್ತಾವಸ್ಥೆಯನ್ನು ಕಳೆದು ಪ್ರತಿ ಶರತ್ಕಾಲದಲ್ಲೂ ದಕ್ಷಿಣ ಸೀಮೆಗಳಿಗೆ ಹೋಗಿ, ವಸಂತ ಕಾಲದಲ್ಲಿ ಹಿಂತಿರುಗುತ್ತವೆ. ಜರ್ಮನಿಯ ಡ್ರೆಸ್‍ಡನ್ ಬಳಿಯ ಒಂದು ಗುಹೆಯಲ್ಲಿ ಚಳಿಗಾಲದಲ್ಲಿ ಗುರುತಿಸಲಾದ ಬಾವಲಿ ಪ್ರಭೇದವೊಂದು ಬೇಸಿಗೆಯಲ್ಲಿ ಸುಮಾರು 750 ಕಿಮೀ ದೂರದಲ್ಲಿಯ ಲಿಥುಯೇನಿಯದಲ್ಲಿ ಕಂಡುಬಂದಿತು.

	ಮೀನುಗಳಲ್ಲಿ ವಲಸೆ : ಇದು ಸ್ವಲ್ಪ ಜಟಿಲವಾಗಿದೆಯೆಂದೇ ಹೇಳಬೇಕು. ಆದರೂ ಇದರ ಆಧ್ಯಯನ ಕೆಲವು ಮಹತ್ತ್ವಪೂರ್ಣ ಮಾಹಿತಿಗಳನ್ನು ಒದಗಿಸಿದೆ. ಸಾಮಾನ್ಯವಾಗಿ ಮರಿ ಮಾಡುವ ಸ್ಥಳಕ್ಕೆ ಪ್ರವಾಹದ ಎದುರಾಗಿ ಚಟುವಟಿಕೆಯಿಂದ ಈಜುತ್ತ ವಲಸೆಹೋಗುವ ಪರಿಪಾಟಿಯನ್ನು ಮೀನುಗಳಲ್ಲಿ ಕಾಣಬಹುದು. ಕೆಲವೊಮ್ಮೆ ಮೊಟ್ಟೆಯಿಡುವ ಸ್ಥಳದಿಂದ ಪ್ರವಾಹದೊಂದಿಗೇ ಸಾಗುವ ನಿಷ್ಕ್ರಿಯ ಚಲನೆಯೂ ಆಗಬಹುದು ಇದು. ಪ್ಲೇಸ್ ಮತ್ತು ಕಾಡ್ ಮುಂತಾದ ಕೆಲವು ಪ್ರಭೇದಗಳು ಸಂಪೂರ್ಣವಾಗಿ ಉಪ್ಪುನೀರಿನಲ್ಲಿಯೇ ಚಲಿಸುತ್ತವಾದರೆ ಟ್ರೌಟ್ ಮುಂತಾದ ಕೆಲವು ಪ್ರಭೇದಗಳು ಸಿಹಿ ನೀರಿನಲ್ಲಿ ಚಲಿಸುವುವು. ಸ್ಯಾಲ್ಮನ್ನಿನಂಥ ಮೀನುಗಳು ಸಿಹಿನೀರಿನಲ್ಲಿ ಮೊಟ್ಟೆಯಿಟ್ಟು ಆಹಾರಾನ್ವೇಷಣೆಗಾಗಿ ಉಪ್ಪುನೀರಿಗೆ ವಲಸೆ ಹೋಗುವುವು. ಇಂಥವಕ್ಕೆ ಅನಾಡ್ರೋಮಸ್ ಮೀನುಗಳೆಂದು ಹೆಸರು. ಈಲ್ ಮುಂತಾದ ಮೀನುಗಳು ಉಪ್ಪು ನೀರಿನಲ್ಲಿ ಮೊಟ್ಟೆಯಿಟ್ಟು ತಮ್ಮ ಬಹುಭಾಗ ಜೀವನವನ್ನು ಸಿಹಿನೀರಿನಲ್ಲಿ ಕಳೆಯುತ್ತವೆ. ಇವು ಕೆಟಡ್ರೋಮಸ್ ಬಗೆಯವು. ಸ್ಯಾಲ್ಮನ್ ಮೀನು ಮೇಲುಹೊಳೆಯ ದಪ್ಪ ಮರಳಿರುವ ನೀರಿನಲ್ಲಿ ಮೊಟ್ಟೆಯಿಡುತ್ತದೆ. ಎಳೆಯ ಮೀನುಗಳು ಅಲ್‍ವಿನ್ಸ್ ಫ್ರೈ, ಪಾರ್ ಮತ್ತು ಸ್ಮೋಲ್ಟ್ ಘಟ್ಟಗಳನ್ನು ಹಾಯುತ್ತ ಸಿಹಿನೀರಿನಲ್ಲಿಯೇ ವಾಸಿಸುತ್ತಿರುವುವು. ಎರಡು ವರ್ಷಗಳ ತರುವಾಯ ಸಮುದ್ರಕ್ಕೆ ಹೋಗಿ ಅಲ್ಲಿ ಮ್ಯಾಕರೆಲ್ ಮತ್ತು ಹೆರಿಂಗ್ ಮುಂತಾದವನ್ನು ತಿನ್ನುತ್ತ ಶೀಘ್ರವಾಗಿ ಬೆಳೆದು ಅನೇಕ ವರ್ಷಗಳ ತನಕ ಸಮುದ್ರದಲ್ಲಿಯೇ ಜೀವಿಸುವುವು. ಪ್ರಾಯಕ್ಕೆ ಬಂದಾಗ ಇವನ್ನು ಗ್ರಿಲ್ಸ್ ಎಂದು ಕರೆಯಲಾಗುವುದು. ಸಂತಾನವೃದ್ಧಿಯ ಕಾಲದಲ್ಲಿ ಗ್ರಿಲ್‍ಗಳು ಹಾಗೂ ಪ್ರೌಢಸ್ಯಾಲ್ಮನುಗಳು ಸಿಹಿನೀರಿಗೆ ವಾಪಸಾಗುತ್ತವೆ. ನದಿಗಳಲ್ಲಿ ಇವು ಅತಿಸ್ವಲ್ಪ ತಿನ್ನುತ್ತವಲ್ಲದೆ ಮೊಟ್ಟೆಯಿಟ್ಟ ಅನಂತರ ಕಡಲಿಗೆ ಹಿಂತಿರುಗಲೂಬಹುದು. ಸ್ಯಾಲ್ಮನುಗಳು ಯಾವ ನದಿಯ ಯಾವ ಸ್ಥಳಗಳಲ್ಲಿ ಮರಿಗಳಾಗಿ ಹುಟ್ಟಿದುವೋ ಈ ಮರಿಗಳು ಬೆಳದು ಮುಂದೆ ಮರಿಮಾಡಲು ಅಲ್ಲಿಗೇ ಹಿಂತಿರುಗುತ್ತವೆ.

	ಯೂರೋಪಿನ ಈಲ್ (ಆಂಗ್ವಿಲ ಆಂಗ್ವಿಲ) ಕೆಟಡ್ರೋಮಸ್ ವಲಸೆಗೆ ಒಂದು ಉದಾಹರಣೆ ಎಂದು ಮೇಲೆ ಹೇಳಿದೆಯಷ್ಟೆ. ಪ್ರಬುದ್ಧ ಈಲ್‍ಗಳು ನದಿಗಳ ಕೆಳಪ್ರವಾಹದೊಂದಿಗೆ ಸಾಗಿ, ಸಮುದ್ರವನ್ನು ಸೇರಿ, ಆಟ್ಲಾಂಟಿಕ್ ಸಾಗರವನ್ನು ದಾಟಿ ವೆಸ್ಟ್ ಇಂಡೀಸಿನ ಉತ್ತರದ ಆಳನೀರಿನಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಯಿಟ್ಟ ಮೇಲೆ ಪ್ರೌಢ ಜೀವಿಗಳು ಸಾಯುತ್ತವೆ. ಅನಂತರ ಮೀನಿನ ಮರಿಗಳು ಪ್ರವಾಹಕ್ಕೆ ಎದುರಾಗಿ ನಿಧಾನಗತಿಯಲ್ಲಿ ಯೂರೋಪಿನ ತೀರಪ್ರದೇಶದಲ್ಲಿ ಸಾಗುತ್ತವೆ. ಈ ಪ್ರಯಾಣ ಸುಮಾರು 3200 ಕಿಮೀ ಇದ್ದು ಇದನ್ನು ಕ್ರಮಿಸಲು ಸುಮಾರು 2.5 ವರ್ಷಗಳು ಬೇಕಾಗುತ್ತವೆ. ಈ ಹಂತದಲ್ಲಿ ಇವು ಚಪ್ಪಟೆಯಾದ ಅಲಗಿನೋಪಾದಿಯ ಡಿಂಬಾವಸ್ಥೆಯಿಂದ ತೆಳಕವಾಗಿ ದುಂಡಾದ ಎಲ್ವರುಗಳಾಗಿ ಮಾರ್ಪಾಟಾಗಿ ಬಹುಸಂಖ್ಯೆಯಲ್ಲಿ ನದಿಯ ಮೇಲ್ಭಾಗಕ್ಕೆ ಹೋಗುತ್ತವೆ. ಇವು ಸಿಹಿನೀರಿನಲ್ಲಿ 5 ರಿಂದ 8 ವರ್ಷಗಳ ತನಕ ಪ್ರೌಢಾವಸ್ಥೆಗೆ ಬರುವವರೆಗೂ ಇರುತ್ತವೆ.

	ಸರೀಸೃಪಗಳು ಮತ್ತು ದ್ವಿಚರಿಗಳಲ್ಲಿ ವಲಸೆ : ಇವುಗಳಲ್ಲಿ ವಲಸೆ ಹೆಚ್ಚಾಗಿ ವಿಕಾಸಗೊಂಡಿಲ್ಲ. ಕೆಲವು ಕಡಲಾಮೆಗಳು ಮೊಟ್ಟೆಯಿಡುವ ಕಾಲದಲ್ಲಿ ಮರಳಿನ ತೀರಪ್ರದೇಶಕ್ಕೆ ಹೋಗುತ್ತದೆ. ಆಗತಾನೇ ಹೊರಬಂದ ಮರಿಗಳು ಸಮುದ್ರಕ್ಕೆ ಹಿಂತಿರುಗುತ್ತವೆ. ವೆಸ್ಟ್‍ಇಂಡೀಸಿನ ಖಾದ್ಯಯೋಗ್ಯ ಹಸಿರಾಮೆ ತೆರೆದ ತೀರ ಪ್ರದೇಶದ ನೀರಿನಲ್ಲಿ ಸುಮಾರು 80 ಕಿಮೀ ದೂರ ಹೋಗುವುದುಂಟು. ಕೆಲವು ಕಡಲ ಹಾವುಗಳು ಮರಿ ಹಾಕಲೋಸುಗ ಕಾಲಕಾಲಕ್ಕೆ ಕಡಲ ತೀರಕ್ಕೆ ಬರುತ್ತವೆ. ನೆಲಗಪ್ಪೆಗಳು ಸಾಕಷ್ಟು ದೂರ ಸಾಗಿ ಗೊತ್ತಾದ ಒಂದು ಕೊಳಕ್ಕೆ ಹೋಗಿ ಮೊಟ್ಟೆಯಿಡುವುವು. ಕೆಲವು ತಿಂಗಳ ತರುವಾಯ ಇವು ಮೊದಲಿನ ತಾಣಕ್ಕೆ ಹಿಂತಿರುಗುತ್ತವೆ. ನ್ಯೂಟ್‍ಗಳು ಮತ್ತು ಕಪ್ಪೆಗಳು ಇದೇ ರೀತಿಯ ವಲಸೆಯನ್ನು ತೋರುವುವಾದರೂ ಅವುಗಳ ದೂರ ವ್ಯಾಪ್ತಿ ಅಷ್ಟು ಗಮನೀಯವಲ್ಲ

	ಅಕಶೇರುಕಗಳಲ್ಲಿ ವಲಸೆ : ಕಠಿಣಚರ್ಮಿಗಳು, ಕೆಲವು ನೆಲದ ಏಡಿಗಳು ಮತ್ತು ರಾಬರ್ ಏಡಿಗಳಲ್ಲಿ ಇದು ಸಾಮಾನ್ಯ. ಇವು ಮೊಟ್ಟೆಯಿಡುವ ವೇಳೆ ಒಳನಾಡಿನಿಂದ ಕಡಲಿಗೆ ಸಾಗುತ್ತವೆ. ಇಲ್ಲಿ ಮೊಟ್ಟೆಗಳಿಂದ ಹೊರಬರುವ ಮರಿ ಬೆಳೆವಣಿಗೆಯ ಎಲ್ಲ ಹಂತಗಳನ್ನೂ ಇಲ್ಲಿಯೇ ಮುಗಿಸಿ ಅನಂತರ ಫ್ರೌಢಜೀವಿಯಾಗಿ ಒಳನಾಡಿಗೆ ಹಿಂತಿರುಗುತ್ತದೆ.

	ವಲಸೆ ಕೀಟಗಳ ಪೈಕಿ ಮುಖ್ಯವಾದವು ಮಿಡತೆಗಳು. ಇಲ್ಲೂ ಪ್ರಮುಖವಾದವು ಯೂರೊಪ್, ದಕ್ಷಿಣ ಏಷ್ಯ ಮತ್ತು ಉತ್ತರ ಆಫ್ರಿಕದಲ್ಲಿ ಕಾಣದೊರೆಯುತ್ತವೆ. ಉತ್ತರ ಆಫ್ರಿಕ ಮತ್ತು ಏಷ್ಯದ ಕೆಲವು ಭಾಗಗಳಲ್ಲಿ ಮರಳುಗಾಡಿನ ಮಿಡತೆಯುಂಟು. ಇವೆಲ್ಲವೂ ಮೊಟ್ಟೆಯಿಡುವ ಮೊದಲೇ ಪ್ರಬುದ್ಧಾವಸ್ಥೆಯಲ್ಲಿ ದೂರಸ್ಥಳಗಳಿಗೆ ವಸಲೆ ಹೋಗುವುವು. ಲೆಪಿಡಾಪ್ಟರ ಉಪವರ್ಗದ ಮಿಲ್ಕ್ ವೀಡ್ ಚಿಟ್ಟೆ ವಲಸೆಗೆ ಇನ್ನೊಂದು ಒಳ್ಳೆಯ ಉದಾಹರಣೆ. ಶರತ್ಕಾಲದಲ್ಲಿ ಇದು ದಕ್ಷಿಣ ಕೆನಡ ಮತ್ತು ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಗುಂಪು ಸೇರಿ ದಕ್ಷಿಣಾಭಿಮುಖವಾಗಿ ಫ್ಲಾರಿಡ, ಮೆಕ್ಸಿಕೊ, ಮತ್ತು ದಕ್ಷಿಣ ಕ್ಯಾಲಿಪೋರ್ನಿಯಗಳೆಡೆಗೆ ಹಾರುತ್ತದೆ. ಚಳಿಗಾಲವನ್ನು ಅರ್ಧ ಸುಪ್ತಾವಸ್ಥೆಯಲ್ಲಿ ಕಳೆದು ವಸಂತದಲ್ಲಿ ಒಂದೊಂದಾಗಿ ಉತ್ತರಕ್ಕೆ ಹಿಂತಿರುಗುತ್ತಿರುವಂತೆಯೇ ಮೊಟ್ಟೆಗಳನ್ನೂ ಇಡುತ್ತವೆ. ಪತಂಗಗಳು. ಲೇಡಿ ಬರ್ಡ್ ಬೀಟಲ್‍ಗಳು, ಕೊಡತಿಕೀಟಗಳಲ್ಲಿ ವಿಶೇಷವಾಗಿಯೂ ಇನ್ನಿತರ ಕೀಟ ಗುಂಪುಗಳಲ್ಲಿ ವಿರಳವಾಗಿಯೂ ವಲಸೆ ಕಂಡು ಬರುತ್ತದೆ. 
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ